'ಕನ್ನಡದಲ್ಲಿ ವೈಚಾರಿಕ ಸಾಹಿತ್ಯ' : ವಿಚಾರ ಸಾಹಿತ್ಯವೆಂದು ಕರೆಯ ಬಹುದಾದ ಚರ್ಚೆ, ಶಾಸ್ತ್ರ, ಮೀಮಾಂಸೆಯ ಒಂದು ಸಾಹಿತ್ಯ ಪ್ರಕಾರ ಕನ್ನಡದಲ್ಲಿ ಬಹಳ ಹಿಂದಿನಿಂದಲೂ ಸಮೃದ್ಧವಾಗಿ ಬೆಳೆದುಬಂದಿದೆ. ಆದರೆ ಶುದ್ಧ ವೈಚಾರಿಕ ಕೃತಿಗಳು ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದ್ದು ಮಾತ್ರ 20ನೆಯ ಶತಮಾನದಲ್ಲಿ. ಶಾಸನಗಳಲ್ಲೂ ವೈಚಾರಿಕ ಅಂಶಗಳು ಕಂಡುಬರುತ್ತವೆಯಾದರೂ ಅವು ಸಾಹಿತ್ಯ ಪ್ರಕಾರಕ್ಕೆ ಹೆಚ್ಚಾಗಿ ಸೇರುವುದಿಲ್ಲ. 10-11ನೆಯ ಶತಮಾನದವರೆಗೆ ಜೈನಸಾಹಿತ್ಯ ತನ್ನ ದಾರ್ಶನಿಕ ರಂಗದಲ್ಲಿಯೂ ವಿಕಾಸಗೊಂಡಿತ್ತು. ಅಂದಿನ ಸಾಹಿತ್ಯದಲ್ಲಿ ಪ್ರಜ್ಞೆ ಮತ್ತು ಭಾವ (ರಸ) ಎಂಬ ಎರಡು ಪ್ರಕಾರಗಳನ್ನು ಕಲ್ಪಿಸಿದರೆ ಪ್ರಜ್ಞೆಯ ಸಾಹಿತ್ಯದ ಅಂಗವಾಗಿ ವ್ಯಾಕರಣ, ಛಂದಸ್ಸು, ಕಾವ್ಯರೀತಿ ಲಕ್ಷಣಾದಿಗಳಷ್ಟಕ್ಕೆ ಮಾತ್ರ ಕನ್ನಡ ವಿಚಾರ ಸಾಹಿತ್ಯ ಸೀಮಿತವಾಗಿತ್ತು. ಇದಕ್ಕೆ ಕವಿರಾಜಮಾರ್ಗ ಸಾಕ್ಷಿ. ಅನಂತರ ಬಂದ ಕೇಶಿರಾಜನ ಶಬ್ದಮಣಿದರ್ಪಣ, ಭಟ್ಟಾಕಳಂಕನ ಶಬ್ದಾನುಶಾಸನ ಅಲ್ಲದೆ ಆಯುರ್ವೇದ, ಜ್ಯೋತಿಷ ಮುಂತಾದವುಗಳನ್ನು ಕುರಿತ ಗ್ರಂಥಗಳು ಆ ಯುಗದ ವೈಚಾರಿಕ ವಾಙ್ಮಯದ ಉದಾಹರಣೆಗಳು (ನೋಡಿ-ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯ). ಅನಂತರ 12ನೆಯ ಶತಮಾನದಲ್ಲಿ ವೀರಶೈವ ಸಾಹಿತ್ಯಧಾರೆ ಹರಿಯತೊಡಗಿತ್ತು. ಅಂದಿನ ವಿಚಾರಸರಣಿ ಅನಿವಾರ್ಯವಾಗಿ ಮತೀಯ ಸಂಪ್ರದಾಯದ ಹಿನ್ನೆಲೆಯಲ್ಲಿ ಮುಂದುವರಿದರೂ ಸ್ವತಂತ್ರ ವಿಚಾರಗಳು, ಆಲೋಚನೆಗಳ ಮಥನಕ್ರಿಯೆ ನಡೆಯಿತು. ವಚನಸಾಹಿತ್ಯ ಭಕ್ತಿಯ  ವೈರಾಗ್ಯ ಶರಣಾರ್ಥಿ ಅನುಭಾವ ನೀತಿ ಧರ್ಮಗಳ ಪ್ರಚಾರ ಪುರಸ್ಕಾರಗಳ ಧ್ವನಿಯಾಯಿತು.

ಅಂದಿನಿಂದ ಇಂದಿನವರೆಗೆ ಬಹುಮುಖವಾಗಿ ಹರಿದುಬಂದ ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಒಟ್ಟಾರೆ ವಿಚಾರ ಸಾಹಿತ್ಯದ ಮೊತ್ತ ಕಡಿಮೆಯೇ. ವಿಚಾರ ಸಾಹಿತ್ಯದ ಪ್ರಧಾನ ಕ್ಷೇತ್ರಗಳೆಂದರೆ ಶಾಲಾಕಾಲೇಜುಗಳ ಪಠ್ಯಪುಸ್ತಕಗಳ ಹಾಗೂ ಪ್ರಾಧ್ಯಾಪಕರ ಲೇಖನಪ್ರಪಂಚ ಮತ್ತು ವಿಶ್ವವಿದ್ಯಾಲಯಗಳ ಪ್ರಚಾರೋಪನ್ಯಾಸಗಳ ವ್ಯಾಸಂಗ ವಿಸ್ತರಣೆಯ ಫಲವಾದ ಜನಪ್ರಿಯ ಶಾಸ್ತ್ರೀಯ ಗ್ರಂಥ ನಿರ್ಮಿತಿ. ಕರ್ನಾಟಕದ ಬಹುಪಾಲು ವಿಶ್ವವಿದ್ಯಾಲಯಗಳು ವಿಚಾರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿವೆ. ಇಲ್ಲಿ ಮೌಲಿಕ ಸಂಶೋಧನೆ ಇದ್ದರೂ ಅದರ ಪರಿಮಾಣ ಕಡಿಮೆ. ಸಂಗ್ರಹ ಸಂಪಾದನೆಗಳೇ ಹೆಚ್ಚು. ಒಂದು ಮಾತು ನಿಜ, ಮೂಲಭೂತವಾದ ಶಾಸ್ತ್ರವಿಷಯಗಳನ್ನು ಶುದ್ಧ ಕನ್ನಡದ ಮೂಲಕ ಜನಸಾಮಾನ್ಯರಿಗೂ ಒದಗಿಸಿದ ಕೀರ್ತಿ ಈ ಪ್ರಕಟನೆಗಳಿಗೆ ಸಲ್ಲುತ್ತದೆ. ಇದರಿಂದ ಜನತೆಯಲ್ಲಿ ವೈಚಾರಿಕ ಮನೋಧರ್ಮ ಅಂಕುರಿಸಿ ಬೆಳೆಯಲು ಆಸ್ಪದವಾಯಿತು ಎನ್ನಬಹುದು.

ಆಧುನಿಕ ಯುಗದ ಆರಂಭದ ದಶಕಗಳಲ್ಲಿ ವಚನಶಾಸ್ತ್ರದ ಮೇಲೆ ಬೆಳಕು ಚೆಲ್ಲಿದವರು ಫ.ಗು.ಹಳಕಟ್ಟಿ. ಉತ್ತಂಗಿ ಚನ್ನಪ್ಪನವರು ಸರ್ವಜ್ಞನನ್ನು ಬೆಳಕಿನಲ್ಲಿ ತಂದಿರಿಸಿದರೆ ಆರ್ಯದ್ರಾವಿಡ ಕಂದಮಿಳು ಜನಾಂಗದ ಮೂಲ ಮತ್ತು ಕರ್ನಾಟಕ ಸಂಸ್ಕೃತಿಯ ಪುರ್ವಪೀಠಿಕೆಯನ್ನು ಕುರಿತು ಅಗಾಧ ಪರಿಶ್ರಮದಿಂದ ಸಂಶೋಧನೆ ಸಾಗಿಸಿದ ವರು ಶಂ.ಬಾ.ಜೋಶಿ. ಶೂನ್ಯಸಂಪಾದನೆಯನ್ನು ಕುರಿತು ಗ್ರಂಥ ರಚಿಸಿರುವ ಎಚ್.ತಿಪ್ಪೇರುದ್ರ ಸ್ವಾಮಿ, ಛಂದೋವಿಕಾಸವನ್ನು ಬರೆದ ಡಿ.ಎಸ್.ಕರ್ಕಿ ಇಂಥ ಮಹನೀಯ ರನ್ನು ಇಲ್ಲಿ ಸ್ಮರಿಸಬೇಕು. ಹಾಗೆಯೇ ಒಂದು ತಲೆಮಾರಿನ ಇತಿಹಾಸ ಪ್ರಜ್ಞೆಯನ್ನು, ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಕರ್ನಾಟಕ ಗತವೈಭವದ ಲೇಖಕರಾದ ಆಲೂರ ವೆಂಕಟ ರಾಯರು ಕನ್ನಡದ ಕುಲಪುರೋಹಿತ ರೆಂದು ಹೆಸರಾದವರು. ಪ್ರಾಚೀನ ಕವಿಗಳ ಕಾಲನಿರ್ಣಯದಲ್ಲಿ ಕವಿ ಗೋವಿಂದ ಪೈಗಳು ಧನ್ಯಸೇವೆ ಸಲ್ಲಿಸಿದ್ದಾರೆ. ಇತಿಹಾಸ ಸಂಶೋಧನೆಯಲ್ಲಿ ಪಾಂಡುರಂಗರಾವ್ ದೇಸಾಯಿ, ತಿರುಮಲೆ ತಾತಾಚಾರ್ಯ ಶರ್ಮ ಮೊದಲಾದವರು ಗಣ್ಯ ಕೆಲಸ ಮಾಡಿದ್ದಾರೆ.
ಭಾವ(ರಸ)ಸಾಹಿತ್ಯವಿಮರ್ಶನಕ್ಷೇತ್ರದಲ್ಲಿ ತೀ.ನಂ.ಶ್ರೀಕಂಠಯ್ಯನವರ" ಭಾರತೀಯ ಕಾವ್ಯಮೀಮಾಂಸೆ", ದ.ರಾ.ಬೇಂದ್ರೆಯವರ ಸಾಹಿತ್ಯ ಮತ್ತು ವಿಮರ್ಶೆ, ಸಾಹಿತ್ಯದ ವಿರಾಟ್ ಸ್ವರೂಪ, ಗೋಪಾಲಕೃಷ್ಣ ಅಡಿಗರ ಮಣ್ಣಿನ ವಾಸನೆ, ಬಿ.ಎಚ್.ಶ್ರೀಧರರ ಕಾವ್ಯಸೂತ್ರ (ಅನಂತರ ಕಾವ್ಯಸೂತ್ರ), ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ, ಶಿವರುದ್ರಪ್ಪನವರ ವಿಮರ್ಶೆಯ ಪುರ್ವ ಪಶ್ಚಿಮ ಹಾಗೂ ಸೌಂದರ್ಯಸಮೀಕ್ಷೆ, ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯ ಪ್ರಕಾರಗಳನ್ನು ವಿಮರ್ಶಿಸುವ ಇತಿಹಾಸ ಲೇಖನಗಳು - ಇವೇ ಕೆಲವು ಈ ಕ್ಷೇತ್ರದಲ್ಲಿಯ ವೈಚಾರಿಕ ಪ್ರಗತಿಯ ಮೈಲುಗಲ್ಲುಗಳು. ಶಿವರಾಮ ಕಾರಂತರ ವಿಚಾರ ಸಾಹಿತ್ಯ ನಿರ್ಮಾಣವೆಂಬ ಪುಸ್ತಕ ಮಹತ್ತ್ವ ಪುರ್ಣವಾಗಿದೆ. ಅಷ್ಟೇ ಮಹತ್ತ್ವಪುರ್ಣವಾದ ಇನ್ನೊಂದು ಕೃತಿ ಬಿಡಿ ಬರೆಹಗಳು. ಅದೇ ರೀತಿ ವಿ.ಸೀತಾರಾಮಯ್ಯನವರ ಸಾಹಿತ್ಯ ಸಂಪ್ರದಾಯ ಮತ್ತು ಹೊಸ ಮಾರ್ಗ, ಸತ್ಯ ಮತ್ತು ಮೌಲ್ಯ, ಮುಗಳಿಯವರ ""ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು"", ಪ್ರಾಚೀನ ಸಾಹಿತ್ಯದ ಕೆಲವು ಪ್ರಕಾರಗಳು ಮೊದಲಾದುವು ವೈಶಿಷ್ಟ್ಯಪುರ್ಣವಾಗಿವೆ.

ಡಿ.ವಿ.ಜಿ. ಅವರ ಜೀವನ ಸೌಂದರ್ಯ ಮತ್ತು ಸಾಹಿತ್ಯ ಕನ್ನಡದ ವೈಚಾರಿಕ ಪ್ರಜ್ಞೆಗೆ ಒಂದು ನಿದರ್ಶನವಾಗಿದೆ. ಎಸ್.ವಿ.ರಂಗಣ್ಣನವರ ರುಚಿ, ಶ್ರೀರಂಗರ ನಗೆ, ಸುಂಕಾಪುರ ಅವರ ಹೆಬ್ಬೊತ್ತಗೆ ಕನ್ನಡ ಸಾಹಿತ್ಯದಲ್ಲಿ ಹಾಸ್ಯ, ಅ.ನ.ಕೃ. ಅವರ ಸಾಹಿತ್ಯ ಮತ್ತು ಕಾಮ ಪ್ರಚೋದನೆ, ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ, ವಿ.ಸೀ.ಅವರ ಹಣಪ್ರಪಂಚ, ಶ್ರೀರಂಗರ ಶಾರದೆಯ ಸಂಸಾರ, ರಂಗನಾಥ ದಿವಾಕರರ ಗಾಂದೀ ವಾದ, ಗೌರೀಶ ಕಾಯ್ಕಿಣಿ ಅವರ ಮಾಕ್ರ್ಸ್‌ವಾದ, ವಿಚಾರವಾದ, ಎಸ್.ಎಲ್. ಭೈರಪ್ಪನವರ ಸತ್ಯ ಮತ್ತು ಸೌಂದರ್ಯ, ಹಾಲಪ್ಪನವರ ರಾಜಕಾರಣ ಮೂಲಸೂತ್ರಗಳು, ಎನ್.ಆರ್. ರಾವ್ರವರ ರಾಜಕೀಯ ಜಿಜ್ಞಾಸೆ , ಅಡಿಗರ ಲೋಹಿಯಾ ಇತಿಹಾಸ ಚಕ್ರ (ಅನುವಾದ), ವಿಚಾರಪಥ, ಕನ್ನಡ ಅಭಿಮಾನ ಮತ್ತು ಇತರ ಲೇಖನಗಳು ಇವೆಲ್ಲ ತತ್ತ್ವವಿವೇಚನೆಯ ಗಮನಾರ್ಹ ಗ್ರಂಥಗಳೆಂದು ಗುರುತಿಸಬಹುದು.

ಮತೀಯ ಸಿದ್ಧಾಂತಗಳನ್ನು ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ. ಆದರೆ ಅವು ಹೆಚ್ಚಾಗಿ ವಿವರಣಾತ್ಮಕಗಳೇ ಹೊರತು ವಿಶ್ಲೇಷಣೆ, ತೌಲನಿಕ ವಿಮರ್ಶೆ ಮಾಡುವಂಥವಲ್ಲ. ಜೈನಮತ ತತ್ತ್ವಗಳ ಬಗೆಗೆ ಮಿರ್ಜಿ ಅಣ್ಣಾರಾಯರ ಗ್ರಂಥ ಜೈನಧರ್ಮ ಉಲ್ಲೇಖನೀಯವಾಗಿದೆ. ಹಾಗೆಯೇ ಸಂ.ಶಿ.ಭೂಸನೂರಮಠ ಅವರ ಶೂನ್ಯಸಂಪಾದನೆಯ ಪರಾಮರ್ಶೆ ಹೆಸರಿಸಬೇಕಾದ ಪ್ರಮುಖ ಗ್ರಂಥ. ನಿಜವಾದ ವಿಚಾರ ಸಾಹಿತ್ಯವೆಂಬ ದೃಷ್ಟಿಯಿಂದ ಸ್ವಾನುಭವ ಸ್ವೋಪಜ್ಞತೆಯಿಂದ ಬದುಕಿನ ಮರ್ಮವನ್ನರಿತ ತನ್ನ ವಿಚಾರಧಾರೆಯನ್ನು ಕಾರಂತರು ಬಾಳ್ವೆಯ ಬೆಳಕು, ಡಿ.ವಿ.ಜಿ.ಯವರು ಬಾಳಿಗೊಂದು ನಂಬಿಕೆ ಈ ಗ್ರಂಥಗಳಲ್ಲಿ ಪ್ರಕಟಸಿದ್ದಾರೆ. ಆದರೂ ಇಂಥ ಬರೆಹದ ಕೊರತೆ ಕನ್ನಡದಲ್ಲಿ ಬಹಳವಾಗಿದೆ.
ಪ್ರಾಚೀನ ಕಾವ್ಯಕೃತಿಗಳ ಪುನರ್ವಿಮರ್ಶೆ, ಮೌಲ್ಯಮಾಪನಗಳು ಕನ್ನಡದಲ್ಲಿ ಸಾಕಷ್ಟು ಆಗಿವೆ. ಸಿ.ಕೆ.ವೆಂಕಟರಾಮಯ್ಯನವರು ಭಾಸನ ನಾಟಕಗಳ ಬಗೆಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಆದಿಕವಿ ವಾಲ್ಮೀಕಿ ಮತ್ತು ಮಹಾಭಾರತದ ಬಗೆಗೂ ಎ.ಆರ್. ಕೃಷ್ಣಶಾಸ್ತ್ರಿಗಳು ಸಂಸ್ಕೃತ ನಾಟಕಗಳ ಬಗೆಗೂ ಎಸ್.ವಿ.ರಂಗಣ್ಣನವರು ಕಾಳಿದಾಸ ಮತ್ತು ಪಾಶ್ಚಾತ್ಯ ಗಂಭೀರ ನಾಟಕಗಳ ಬಗೆಗೂ ವಿ.ಸೀ.ಯವರು ಕರ್ನಾಟಕ ಕಾದಂಬರಿಯ ಬಗೆಗೂ ಮಹತ್ತ್ವದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಶ್ರೀರಂಗರ ಗೀತಾಗಾಂಭೀರ್ಯ, ಡಿ.ವಿ.ಜಿಯವರ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ, ಬೇಂದ್ರೆಯವರ ಕನ್ನಡ ಸಾಹಿತ್ಯದ ನಾಲ್ಕು ನಾಯಕರತ್ನಗಳು, ಶಂ.ಬಾ.ಜೋಶಿ ಅವರ ಕರ್ಣನ ಮೂರು ಚಿತ್ರಗಳು, ಕುವೆಂಪು ಅವರ ತಪೋನಂದನ, ದ್ರೌಪದಿಯ ಶ್ರೀಮುಡಿ, ರಸೋ ವೈಸಃ ಕಾವ್ಯ ವಿಹಾರ, ಮುಗಳಿಯವರ ತವನಿದಿ, ದೇಜಗೌ ಅವರ ಕೆಲವು ಕೃತಿಗಳನ್ನು ಇಲ್ಲಿ ಎತ್ತಿಹೇಳಬಹುದು. ಇದೇ ಜಾಡಿನಲ್ಲಿ ಆರ್.ಆರ್.ದಿವಾಕರರ ವಚನಶಾಸ್ತ್ರರಹಸ್ಯ, ಉಪನಿಷದ್ರಹಸ್ಯ, ಎಂ.ಆರ್.ಶ್ರೀನಿವಾಸಮೂರ್ತಿಯವರ ವಚನಧರ್ಮಸಾರ, ಹಲಸಂಗಿ ಚನ್ನಮಲ್ಲಪ್ಪನವರ ಕಾಳರಾತ್ರಿ ಮತ್ತು ಅರವಿಂದರ ಪುರ್ಣಯೋಗದ ಪರಿಚಯ ಮಾಡಿಕೊಡುವ ಅನುಭಾವೀ ಬರೆಹಗಳೂ ವಿಚಾರಣೀಯವಾಗಿವೆ. ಹಾಗೆಯೇ ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರ ಪ್ರಕಟಿಸಿರುವ ಪಂಪ ಒಂದು ಅಧ್ಯಯನ, ಮೂರು ಸಂಪುಟಗಳ ವಿಚಾರಸಾಹಿತ್ಯ, ಎಂ.ಎಂ.ಕಲಬರ್ಗಿಯವರ ಕವಿರಾಜಮಾರ್ಗ ಕಾಲಪರಿಸರದ ಕನ್ನಡ ಸಾಹಿತ್ಯ, ‘ಮಾರ್ಗ’ ಸಂಪುಟಗಳು, ಎಸ್.ವಿ.ರಂಗಣ್ಣನವರ ಹಳಗನ್ನಡ ಕವಿಗಳನ್ನು ಕುರಿತ ‘ಶೈಲಿ’ ಮುಂತಾದ ಬರೆಹಗಳು ಉಲ್ಲೇಖನೀಯವಾದವು.

ಪ್ರಗತಿಶೀಲ ಸಾಹಿತ್ಯದ ಚಳವಳಿಯಿಂದಾಗಿ ಅ.ನ.ಕೃ., ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ ಮುಂತಾದವರು ತಮ್ಮ ಲೇಖನಗಳಲ್ಲಿ ಆರ್ಥಿಕ ರಾಜಕೀಯ ಪ್ರಜ್ಞೆಯ ವೈಚಾರಿಕತೆಯನ್ನು ತುಂಬಿದರು. ಒಂದನೆಯ ಮಹಾಯುದ್ಧದ ಅನಂತರ ಹೊಸ ಸಾಹಿತ್ಯ ಹುಟ್ಟಿತು. ಎರಡನೆಯ ಮಹಾಯುದ್ಧದ ಅನಂತರ ಹೊಸ ವಿಮರ್ಶೆ ಹುಟ್ಟಿಬಂದಿತು. ಮೂವತ್ತರ ದಶಕದಲ್ಲಿ ಮಾಕ್ರ್ಸ್‌ವಾದಿ ದೃಷ್ಟಿ ತೆರೆದರೆ 50ರ ದಶಕದಲ್ಲಿ ಮನೋವೈಜ್ಞಾನಿಕ ದೃಷ್ಟಿ ಬೆಳಗಿತು. ಸಾಂಪ್ರದಾಯಿಕ ವಿಚಾರವನ್ನು ಆಧುನಿಕ ಭಾಷೆಯಲ್ಲಿ ದೇವುಡು ನರಸಿಂಹಶಾಸ್ತ್ರಿಗಳಂಥವರು ಯಶಸ್ವಿಯಾಗಿ ಕೊಡಲು ಯತ್ನಿಸಿದರು. ಗಾಂದೀವಾದವನ್ನು ಸಿದ್ದವನಹಳ್ಳಿ ಕೃಷ್ಣಶರ್ಮರು ತಮ್ಮದೇ ಆದ ಲಲಿತ ಮಧುರ ಶೈಲಿಯಲ್ಲಿ ಕನ್ನಡಕ್ಕೆ ನೀಡಿದರು. ಹಾಗೆಯೇ ರವೀಂದ್ರನಾಥ ಠಾಕೂರ್ ಹಾಗೂ ಸರೋಜಿನಿ ನಾಯ್ಡು ಅವರನ್ನು ಕುರಿತು ಎಸ್.ಎಸ್.ಒಡೆಯರು ಎರಡು ಸಮಾಲೋಚನಾತ್ಮಕ ಪುಸ್ತಕಗಳನ್ನು ನೀಡಿದ್ದಾರೆ. ಚನ್ನವೀರಕಣವಿಯವರೂ ಸಾಹಿತ್ಯಚಿಂತನೆಯನ್ನು ಚಿಂತನೀಯವಾಗಿ ಮಾಡಿದ್ದಾರೆ. ಅದೇ ರೀತಿ ಧಾರವಾಡಕರ, ಎನ್ಕೆ, ಆರ್.ಕೆ.ಕುಲಕರ್ಣಿ, ಗೊರೂರು, ಗದಗಕರ ಮೊದಲಾದವರ ಹರಟೆಗಳಲ್ಲಿಯೂ ವೈಚಾರಿಕ ಅಂಶ ಒಡೆದೆದ್ದು ಕಾಣಿಸುವುದೂ ಇದೆ.

ಅನುವಾದ ರಂಗದಲ್ಲಿ ಅರವಿಂದರ ಭಾರತೀಯ ನವಜನ್ಮವನ್ನು ಬೇಂದ್ರೆಯವರೂ ಭಾರತೀಯ ರಾಜಧರ್ಮ ಮತ್ತು ಜಾನ್ ಸ್ಟೂವರ್ಟ್ ಮಿಲ್ಲನ ಲಿಬರ್ಟಿಯನ್ನು (ಸ್ವಾತಂತ್ರ್ಯ) ಎನ್.ಸಿ.ಆರ್. ಮತ್ತು ಬಿ.ಎಚ್.ಶ್ರೀಧರರೂ ಧ್ವನ್ಯಾಲೋಕ ಮತ್ತು ಕಾವ್ಯಪ್ರಕಾಶಾದಿಗಳನ್ನು ಕೆ.ಕೃಷ್ಣಮೂರ್ತಿಯವರೂ ದಶರೂಪಕವನ್ನು ಕೆ.ವಿ.ಸುಬ್ಬಣ್ಣನವರೂ ಆಡ್ಲರನ ವ್ಯಕ್ತಿಮನೋವಿಜ್ಞಾನವನ್ನು (ಬಾಳಿನ ಗುಟ್ಟು) ಗೌರೀಶ ಕಾಯ್ಕಿಣಿಯವರೂ ಕನ್ನಡದಲ್ಲಿ ನೀಡಿದ್ದಾರೆ. ರಘುನಾಥಬಿಡೆ ಅವರ ವಾಲ್ಮೀಕಿ ರಾಮಾಯಣದಲ್ಲಿ ಶಾಪ ಮತ್ತು ವರ ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡಿವೆ.

ಮನೋವಿಜ್ಞಾನ  ರಂಗದಲ್ಲಿ ಕುಪ್ಪುಸ್ವಾಮಿ ಅವರ ಮನೋವಿಜ್ಞಾನ, ಹನುಮಂತರಾಯರ ಮಾನಸದರ್ಪಣ, ಸಿ.ಆರ್.ಚಂದ್ರಶೇಖರ ಅವರ ನಿದ್ರೆ ಮತ್ತು ಕನಸುಗಳು, ಕೆ.ವಾರಿಜಾ ಅವರ ನಿಮ್ಮ ಮನಸ್ಸು, ಗೌರೀಶ ಕಾಯ್ಕಿಣಿಯವರ ಮನೋವಿಜ್ಞಾನದ ರೂಪರೇಖೆಗಳು, ಗಂಡು, ಹೆಣ್ಣು ಮತ್ತು ಪ್ರೀತಿ, ವಿಚಾರವಾದ, ಎಂ.ಶಿವರಾಮ್ ಅವರ ಮನಮಂಥನ, ಮೀನಗುಂಡಿ ಸುಬ್ರಹ್ಮಣ್ಯಂ ಅವರ ಮನಸ್ಸು ಇಲ್ಲದ ಮಾರ್ಗ, ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ, ವಿಚಾರವಾದಿ ಕೋಡುವರು  ದೇವರು, ದೆವ್ವ ವಿಜ್ಞಾನ  - ಇವೇ ಮುಂತಾದವನ್ನು ಹೆಸರಿಸಬಹುದು.
ವಿಜ್ಞಾನ ರಂಗದಲ್ಲೂ ಅನೇಕ ಗ್ರಂಥಗಳು ಪ್ರಕಟವಾಗಿವೆ. ಆದರೆ ವಿಜ್ಞಾನವನ್ನು ಕುರಿತು ಸಮುನ್ನತ ವೈಚಾರಿಕ ಕಾಣಿಕೆಯನ್ನು ದೊಡ್ಡ ಮೊತ್ತದಲ್ಲಿ ತಮ್ಮ ವಿಶ್ವದಕೋಶದ ಮೂರು ಸಂಪುಟಗಳಲ್ಲಿ ಸಲ್ಲಿಸಿದವರು ಶಿವರಾಮ ಕಾರಂತರು.
ಪುರಂದರದಾಸರ ಕನಕದಾಸರ ಚತುಶ್ಶತಮಾನೋತ್ಸವಗಳ ನಿಮಿತ್ತ ಉಭಯದಾಸರ ಭಕ್ತಿಕಾವ್ಯದ ಬಗೆಗೆ ಅನೇಕ ಲೇಖನಸಂಗ್ರಹಗಳ ಸುಗ್ಗಿಯೇ ಬೆಳೆದು ಬಂದಿತು. ಹಾಗೆಯೇ ಷೇಕ್ಸ್ಪಿಯರನ ಆರನೆಯ ಶತಮಾನೋತ್ಸವದ ನಿಮಿತ್ತ ಹೊಸ ದಿಲ್ಲಿಯಲ್ಲಿ ಕನ್ನಡ ಭಾರತೀ ಸಂಸ್ಥೆಯವರು ಒಂದು ಉತ್ಕೃಷ್ಟ ಪರಿಸಂವಾದಾತ್ಮಕ ಗ್ರಂಥವನ್ನು (ಷೇಕ್ಸ್ಪಿಯರನಿಗೆ ನಮಸ್ಕಾರ) ಪ್ರಕಟಿಸಿದ್ದಾರೆ. ಎ.ಎನ್.ಮೂರ್ತಿರಾಯರು ಷೇಕ್ಸ್ಪಿಯರನ ಕೃತಿಗಳನ್ನು ಕುರಿತು ಒಂದು ಪರಿಚಯ ಗ್ರಂಥವನ್ನು ಬರೆದಿದ್ದಾರೆ. ಮುಂದೆ ಗಾಂದೀಶತಾಬ್ದಿಯ ನಿಮಿತ್ತವ ಗಾಂದೀತತ್ತ್ವ ವಿಚಾರಗಳ ಅನೇಕ ಲೇಖನ-ಉಪನ್ಯಾಸ ಸಂಗ್ರಹಗಳು ಬೆಳಕಿಗೆ ಬಂದಿವೆ. ಇದಲ್ಲದೆ ಎಚ್.ನರಸಿಂಹಯ್ಯನವರ ಆತ್ಮಕಥೆ ತೆರೆದ ಮನ, ಪಂಡಿತ ತಾರಾನಾಥರ ಧರ್ಮಸಂಭವ, ಸ.ಜ.ನಾಗಲೋಟಿಮಠ ಅವರ ಸತ್ತ ಮೇಲೆ ಸಮಾಜಸೇವೆ - ಇವೆಲ್ಲವನ್ನು ವಿಚಾರಸಾಹಿತ್ಯದಲ್ಲಿ ಉಲ್ಲೇಖಿಸಬಹುದು.

ಧಾರವಾಡದ ಮಿಂಚಿನಬಳ್ಳಿ ಪ್ರಕಾಶನ ಸಂಸ್ಥೆ ಬುರ್ಲಿ ಬಿಂದುಮಾಧವ ಅವರ ನೇತೃತ್ವದಲ್ಲಿ ಕಾಲುಶತಮಾನವನ್ನು ಮೀರಿ ಕೇವಲ ವಿಚಾರಸಾಹಿತ್ಯವನ್ನೆ ಪಂಥ ತೊಟ್ಟು ಪ್ರಕಟಿಸುತ್ತ ಬಂದಿರುವುದನ್ನು ಇಲ್ಲಿ ನೆನೆಯಲೇಬೇಕು. ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯದ ಪ್ರಬುದ್ಧ ಕರ್ಣಾಟಕ ಮತ್ತು ಅದರ ವಿಸ್ತರಣೆಗಳಾದ ವಿಜ್ಞಾನ ಕರ್ಣಾಟಕ ಮತ್ತು ಮಾನವಿಕ ಕರ್ಣಾಟಕ, ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಭಾರತಿ, ಬೆಂಗಳೂರು ವಿಶ್ವವಿದ್ಯಾಲಯದ ಸಾಧನೆ ಮುಂತಾದ ನಿಯತಕಾಲಿಕಗಳೂ ಕನ್ನಡದಲ್ಲಿರುವ ವೈಚಾರಿಕ ವಾಙ್ಮಯ ಪ್ರಕಾಶನಕ್ಕೆ ಆಧಾರವಾಗಿವೆ. ಹೊಸ ವಿಮರ್ಶೆಯ ಪ್ರತಿಕ್ರಿಯಾಮಾಲೆಯೆಂಬಂತೆ ಸಾಕ್ಷಿ, ಸಂಕ್ರಮಣ, ಮನ್ವಂತರ, ಪರಂಪರೆ ಇತ್ಯಾದಿ ನಿಯತಾನಿಯತ ಕಾಲಿಕಗಳು ಕೇವಲ ಸಾಹಿತ್ಯ ಚರ್ಚೆಗಾಗಿಯೇ ಮೀಸಲಾಗಿ ಹೊರಟಿದ್ದು ಶ್ಲಾಘನೀಯ ಸಾಹಸ. 
ವಸ್ತುತಃ ವಿಚಾರಸಾಹಿತ್ಯ ವಿಸ್ತಾರವಾಗಿ ಬರಬೇಕಾದದ್ದು ಸಾಮಾಜಿಕ ವಿಚಾರ ಕ್ಷೇತ್ರದಲ್ಲಿ. ಇಂದು ಸ್ಥಿತ್ಯಂತರಗೊಳ್ಳುತ್ತಿರುವ ಸಾಮಾಜಿಕ ಜೀವನದ ಬಗೆಗೆ ಆರ್ಥಿಕ, ಮನೋವೈಜ್ಞಾನಿಕ, ಮಾನವವಂಶಶಾಸ್ತ್ರೀಯ, ಸಾಂಸ್ಕೃತಿಕ - ಹೀಗೆ ನೂರು ಮುಖವಾಗಿ ವಿಚಿಕಿತ್ಸೆ ನಡೆಯಬೇಕು. ನಾಗರಿಕನ ಅಸಹಾಯಕತೆ, ಏಕಾಂಗಿ ವ್ಯಕ್ತಿತ್ವ, ನಾಯಕತ್ವ, ಬಹುರಾಷ್ಟ್ರ ನಾಗರಿಕತ್ವ, ಬಹುಭಾಷಿಕ ರಾಷ್ಟ್ರೀಯತ್ವ, ಜಾತೀಯತೆ, ವಿಕಾಸಾಬಿವೃದ್ಧಿಯ ಸಾಂಸ್ಕೃತಿಕ ಫಲಿತಾಂಶ, ಪಕ್ಷಪದ್ಧತಿ, ಜನಾಬಿsಪ್ರಾಯ ನಿರ್ಮಿತಿ, ಯುವಜನರ ಸಮಸ್ಯೆ-ಇಂಥ ವಿವಿಧ ಯಕ್ಷಪ್ರಶ್ನೆಗಳನ್ನು ಪರಿಶೀಲಿಸಿ ಪರಿಷ್ಕರಿಸುವುದಿರಲಿ,ಆ ಕುರಿತು ಪ್ರಜ್ಞೆಯನ್ನು ಜಾಗೃತಗೊಳಿಸಲು ಪರಿಸಂವಾದಗಳನ್ನು ಆರಂಬಿsಸಬಲ್ಲ ಸಾಹಿತ್ಯ ಗುಣದಲ್ಲಿಯೂ ಗಾತ್ರದಲ್ಲಿಯೂ ತುಸು ಬೆಳೆದು ಬರಬೇಕು. ಇಂಥ ಸಾಮಾಜಿಕ ವಿಚಾರದಲ್ಲಿ ಶಂ.ಬಾ.ಜೋಶಿಯವರ ಸಮಾಜದರ್ಶನದ ಅನಂತರ ಶಾಸ್ತ್ರೀಯ ವಿಚಿಕಿತ್ಸೆಗೆ ಕೈಹಾಕಿದ ಪುಸ್ತಕಗಳೆಂದರೆ ಎಚ್.ಎಂ.ಮರುಳಸಿದ್ದಯ್ಯನವರ ಸಮಾಜಕಾರ್ಯ ಮತ್ತು ಸಮಾಜ ಶಾಸ್ತ್ರದ ಕೆಲವು ಪಾಠಗಳು, ಎನ್.ಆರ್.ರಾವ್ ಅವರ ಜನಾಬಿsಪ್ರಾಯ, ಪ್ರಚಲಿತ ಸಾರ್ವಜನಿಕ ಚರಿತ್ರೆಯನ್ನು ಕುರಿತ ಕಾಣಿಕೆಯೆಂದರೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಜೀವನ ಪತ್ರಿಕೆಯ ಸಂಪಾದಕೀಯಗಳ ಲೋಕಚರಿತವೆಂಬ ಸಂಕಲನ. ಈ ಮಾದರಿಯ ಬರೆಹ ಕನ್ನಡಕ್ಕೆ ಅಪುರ್ವವೆನ್ನಬಹುದು. ಎ.ಎನ್.ಮೂರ್ತಿರಾಯರ ದೇವರು ಎಂಬ ಕೃತಿ ಇಲ್ಲಿ ಉಲ್ಲೇಖನೀಯ. ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ವೈಚಾರಿಕ ಲೇಖನಗಳನ್ನು ಮರೆಯುವಂತಿಲ್ಲ. ನಿರಂಕುಶಮತಿಗಳಾಗಿ, ಷಷ್ಟಿನಮನ, ಮನುಜಮತ ವಿಶ್ವಪಥ ಮುಂತಾದ ಕೃತಿಗಳೂ ವಿಶೇಷವಾಗಿ ಇಲ್ಲಿ ಉಲ್ಲೇಖಾರ್ಹ. ಕುವೆಂಪು ಅವರ ದಾರ್ಶನಿಕ ಕಾವ್ಯಮೀಮಾಂಸೆ ಆ ಕ್ಷೇತ್ರದ ಒಂದು ಮಹತ್ತ್ವದ ಕೃತಿ, ಸ್ವೋಪಜ್ಞ ಚಿಂತನೆಯ ಫಲ,  ಎಚ್.ತಿಪ್ಪೇರುದ್ರಸ್ವಾಮಿಯವರ ‘ಕುವೆಂಪು ಅವರ ವೈಚಾರಿಕತೆ’ ಎಂಬುದು ಆ ಕವಿಯ ವ್ಯಾಪಕ ಚಿಂತನೆಯ ಎಲ್ಲ ಮಗ್ಗುಲುಗಳ ದರ್ಶನ ಮಾಡಿಕೊಡಲು ಹವಣಿಸುವ ಕೃತಿಯಾಗಿದೆ.

ವಿಚಾರ ಸಾಹಿತ್ಯವೆಂಬ ಒಂದು ಪ್ರತ್ಯೇಕ ಪ್ರಕಾರದ ಕಕ್ಷೆಯೊಳಕ್ಕೆ ಎಂಥ ಕೃತಿಗಳು ಬರುವುವೆಂಬ ಜಿಜ್ಞಾಸೆ ಬಹಳ ಕಷ್ಟದ್ದು; ವೈಚಾರಿಕತೆ ಇಲ್ಲದ ಕೃತಿ ಇಲ್ಲವೇ ಇಲ್ಲವೆಂದು ಹೇಳಬೇಕು. ಸೃಜನಶೀಲ ಎಂಬ ಕೃತಿಯಲ್ಲೂ ಹಿನ್ನೆಲೆಯಲ್ಲಿ ವೈಚಾರಿಕತೆ ಇದ್ದೇ ಇರುತ್ತದೆ. ಆದರೆ ಅದು ಸುಪ್ತವಾಗಿ ಕಂಡೂ ಕಾಣದಂತೆ, ಹಾಲಿನಲ್ಲಿ ಸಕ್ಕರೆ ಬೆರೆತಂತೆ ವ್ಯಾಪಿಸಿರುತ್ತದೆ. ಕಾವ್ಯಮೀಮಾಂಸಕಾರರ ಪ್ರಕಾರ ಕಾವ್ಯದಲ್ಲಿ (ಸ್ಥೂಲವಾಗಿ ಎಲ್ಲ ಸೃಜನ ಸಾಹಿತ್ಯದಲ್ಲಿ) ಪ್ರತಿಭೆ ಮತ್ತು ಪ್ರಜ್ಞೆ  - ಈ ಎರಡೂ ಅಂಶಗಳಿರುತ್ತವೆ. ಪ್ರತಿಭೆ ಹೃದಯಸಂಬಂದಿಯಾದ್ದು, ಚಿತ್ತವೃತ್ತಿ ಪ್ರಧಾನವಾಗಿದ್ದಾಗ ಹೊಮ್ಮುವಂಥದ್ದು, ಪ್ರತಿಭೆ ಎಂದರೆ ಹೊಳಹು ಎನ್ನುತ್ತಾರೆ ತೀನಂಶ್ರೀ. ಪ್ರಜ್ಞೆ ಬುದ್ಧಿಸಂಬಂದಿ ಎನ್ನಬಹುದು. ಇದು ಮುಖ್ಯವಾಗಿ ಸ್ಮೃತಿ ಬುದ್ಧಿ ಮತ್ತು ಮತಿ ಇವನ್ನೊಳಗೊಳ್ಳುತ್ತವೆ. ಹಿಂದೆ ಅದದ್ದನ್ನು ನೆನೆಯುವುದು ಸ್ಮೃತಿ, ಈಗ ನಡೆಯು ವುದನ್ನು ಪರಿಶೀಲಿಸುವುದು ಬುದ್ಧಿ; ಮುಂದೆ ಆಗುವುದನ್ನು ಊಹಿಸುವುದು ಮತಿ. ಈ ಮೂರೂ ವಿಚಾರ ಸಾಹಿತ್ಯದಲ್ಲಿ ಎದ್ದು ಕಾಣುತ್ತವೆ. ಅದರಲ್ಲೂ ರಂಜನೆಯ ಅಂಶ ಇರಬೇಕು, ಆದರೆ ಅದು ಸಂಯಮ ದಿಂದ ಕೂಡಿದ್ದು ಹಿನ್ನೆಲೆಯಲ್ಲಿರುತ್ತದೆ. ಹನ್ನೆರಡನೆಯ ಶತಮಾನದ ವೀರಶೈವ ವಚನಕಾರರ ವಚನಗಳಲ್ಲಿ ವಿಚಾರ ಪ್ರಾಧಾನ್ಯವನ್ನು ಗಮನಿಸಬಹುದು. ಅವು ಮುಖ್ಯವಾಗಿ ಆಧ್ಯಾತ್ಮಿಕ ಎನ್ನಬಹುದಾದರೂ ಜಗತ್ತು, ಸಮಾಜ ಮುಂತಾದ ವಿಚಾರಗಳ ವಿವೇಚನೆಯೂ ಪ್ರಧಾನವಾಗಿರುತ್ತದೆ.

ಸೃಜನ ಪ್ರಧಾನ ಸಾಹಿತ್ಯ ಸಾಮಾನ್ಯವಾಗಿ ಸಂಶ್ಲೇಷಣಾತ್ಮಕವಾದ್ದು ಎನ್ನುವುದಾದರೆ ವಿಚಾರ ಸಾಹಿತ್ಯ ವಿಶ್ಲೇಷಣಾತ್ಮಕವಾದ್ದು. ಯಾವುದೇ ವಿಷಯವನ್ನು ಕುರಿತಂತೆ ಪ್ರಯೋಗಪುರ್ವಕವಾಗಿ ಚಿಕಿತ್ಸಕ ದೃಷ್ಟಿಯನ್ನು ಬೀರಿ ಅದರ ಸತ್ತ್ವವನ್ನು ಗುರುತಿಸಿ, ಸಂಗ್ರಹಿಸಿದ ಮಾಹಿತಿಯನ್ನೆಲ್ಲ ವಿಂಗಡಿಸಿ ವಿವೇಚಿಸಿ ಕರಾರುವಾಕ್ಕು ಎನಿಸುವಂತೆ ನಿರ್ಣಯ ನೀಡುವ ದಿಕ್ಕಿನಲ್ಲಿ ಮಂದುವರಿಯುವುದು ವಿಚಾರ ಸಾಹಿತ್ಯದ ರೀತಿ ಎನ್ನುವುದಾದರೆ, ನಮ್ಮಲ್ಲಿ ಸೃಷ್ಟಿಯಾಗಿರುವ ಎಲ್ಲ ಸ್ಪೋಪಜ್ಞ ಚಿಂತನಶೀಲ ವಿವೇಚನೆ ಹಾಗೂ ಇದಮಿತ್ಥಂ ಎಂಬ ನಿಲುವ ವಿಚಾರ ಸಾಹಿತ್ಯದ ಕಕ್ಷೆಯೊಳಗೆ ಬರುತ್ತವೆ. ಮುಖ್ಯವಾಗಿ ಯಾವುದೋ ಒಂದು ನಿಶ್ಚಿತ ವಿಷಯದ ಬಗ್ಗೆ ಸಂಶೋಧನೆ, ಅದರ ಫಲವಾದ ಪ್ರಜ್ಞೆನದ ದಾಖಲೆ, ಅನುಶೀಲನೆ, ನಿರ್ಣಯಗಳಿಂದ ಕೂಡಿದ್ದು ವಿಚಾರ ಸಾಹಿತ್ಯ ಎನಿಸಿಕೊಳ್ಳುತ್ತದೆ. ವಿಜ್ಞಾನ, ಮಾನವಿಕ, ಸಮಾಜ  ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಯ ಫಲಶೃತಿಗಳು ನಿಬಂಧ ರೂಪದಲ್ಲಿ ಬಂದಾಗ ಅವು ಆಧಾರಭೂತ ವಿಚಾರಸಾಹಿತ್ಯ ಎನಿಸಿಕೊಳ್ಳುತ್ತವೆ. ವಿದ್ವಾಂಸರ ಅಥವಾ ಆಯಾ ಕ್ಷೇತ್ರದ ತಜ್ಞರ ಹಾಗೂ e್ಞÁನಾರ್ಥಿಗಳ ಗಮನವನ್ನು ಸೆಳೆಯುವ ಅಂಥ ನಿಬಂಧಗಳ ಆಧಾರದ ಮೇಲೆ ಇತರರಿಗೆ, ಅನಂತರ ಸಾಮಾನ್ಯರಿಗೆ-ಹೀಗೆ ಮೂರು ಹಂತಗಳಲ್ಲಿ ವಿಚಾರ ಸಾಹಿತ್ಯ ಪ್ರವಹಿಸಬೇಕು. ಆದರೆ ಈ ನಿಟ್ಟಿನಲ್ಲಿ ಸೆಮಿನಾಲ್- ಬೀಜಸ್ವರೂಪಿ- ಎಂಬ ಕೃತಿಗಳು ಕನ್ನಡದಲ್ಲಿ ಬಹಳ ಕಡಿಮೆ. ಆಧುನಿಕ ಕಾಲದವರೆಗೂ ಸಂಸ್ಕೃತ ಪ್ರಾಕೃತ ಗ್ರಂಥಗಳಲ್ಲಿಯ ಮೂಲಭೂತ ಚಿಂತನೆಯ ಕೃತಿಗಳನ್ನೇ ಆಧರಿಸಿ ರಚನೆಯಾಗುತ್ತ ಬಂದ ಕನ್ನಡ ಕೃತಿಗಳಲ್ಲಿ ಸ್ವೋಪಜ್ಞತೆಯ ಅಂಶ ಬಹಳ ಕಡಿಮೆ.
ಬೀಜಸ್ವರೂಪಿ ಕೃತಿ ರಚನೆ ಇಲ್ಲದೆ ಮುಂದಿನ ಎರಡು ಹಂತಗಳಲ್ಲಿ ವಿಚಾರ ಹರಿದು ಬರುವುದೆಂದು ನಿರೀಕ್ಷಿಸುವುದು ತಪ್ಪು. ಆದರೂ ವಿರಳವಾಗಿಯಾದರೂ ಅಂಥ ಕೃತಿಗಳು ಬರುತ್ತಿವೆಯೆಂದು ಸಮಾಧಾನಪಟ್ಟುಕೊಳ್ಳಬೇಕು. ಹಿಂದೆ ಹೇಳಿದ ಮಹಾನ್ ಲೇಖಕರ ಕೃತಿಗಳಲ್ಲದೆ ಈಚಿನ ವರ್ಷಗಳಲ್ಲಿ ಮುಖ್ಯವಾಗಿ 20ನೆಯ ಶತಮಾನದ ಉತ್ತರಾರ್ಧದಲ್ಲಿ ಈ ಪ್ರಯತ್ನ ಮುಂದುವರಿದಿದೆ. ತುಂಬ ವ್ಯಾಪಕವಾದ ಕ್ಷೇತ್ರ ಇದಾದ್ದರಿಂದ ಕೆಲವು ದಿಕ್ಸೂಚಿಗಳನ್ನಷ್ಟೆ ಇಲ್ಲಿ ನೀಡಬಹುದು. ಆದರೂ ಇದು ಸಮಸ್ತ ಎನಿಸಲಾರದು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾದಿsಕಾರ ಇವುಗಳ ಕೆಲವು ಪ್ರಕಟಣೆಗಳು ಈ ಪ್ರಕಾರಕ್ಕೆ ಸೇರುತ್ತವೆ. ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟವಾದ ಕೆಲವು ಮಹತ್ತ್ವದ ಕೃತಿಗಳು ಪುರ್ನಮುದ್ರಣಗಳಾದರೂ ಉಲ್ಲೇಖಾರ್ಹ.
ನವ ಕರ್ನಾಟಕ ಪ್ರಕಾಶನ ಸಂಸ್ಥೆ ಅನೇಕ ವಿಚಾರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದೆ. ಸಂಪ್ರದಾಯ, ವಿe್ಞÁನ ಮತ್ತು ಸಮಾಜ (ಎಸ್.ಬಾಲಚಂದ್ರರಾವ್), ವೈe್ಞÁನಿಕ ಮನೋಧರ್ಮ (ಜಿ.ಟಿ.ನಾರಾಯಣ ರಾವ್), ಮಾಕ್ರ್ಸ್‌ವಾದ ಮತ್ತು ಭಗವದ್ಗೀತೆ (ಅನು: ಎಸ್.ಆರ್.ಭಟ್), ಧರ್ಮ ಮತ್ತು ವೈಚಾರಿಕತೆ (ಬಿ.ವಿ.ವೀರಭದ್ರಪ್ಪ), ನಾನೇಕೆ ನಾಸ್ತಿಕ (ಅನು: ಎನ್.ಗಾಯತ್ರಿ) ಮೊದಲಾದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಈ ಸಂದರ್ಭದಲ್ಲಿ ಎಚ್ಚೆಸ್ಕೆ ಅವರ ವಿಚಾರ ವಿಹಾರ, ಕನ್ನಡದ ಸ್ಥಿತಿಗತಿ, ಶಿಕ್ಷಣ ಸಂಸ್ಕೃತಿ, ಸರ್ವಾರ್ಥ ಸಾಧನೆ - ಈ ಕೃತಿಗಳು ವಿಚಾರ ಸಾಹಿತ್ಯದ ಹಲವು ಪ್ರಕಾರಗಳ ವಿಹಂಗಮ ನೋಟ ನೀಡುತ್ತವೆ. ಪ್ರಾದಿsಕಾರದ ಜಾಗತಿಕ ಚಿಂತಕರ ಮಾಲೆ, ವಿe್ಞÁನ ಶಿಕ್ಷಣ ಮಾಲೆ, ಅನುವಾದ ಮಾಲೆ, ಮೂಲ ಭೂತ ಶೈಕ್ಷಣಿಕ ಮಾಲೆ, ವಿe್ಞÁನದೀಪ ಮಾಲೆ- ಇವು ಸಾಮಾನ್ಯರ e್ಞÁನದ ಪರಿದಿsಯನ್ನು ವಿಸ್ತರಿಸುವ ಪ್ರಯತ್ನಗಳಾಗಿ ಸ್ವಾಗತಾರ್ಹವೆನಿಸುತ್ತವೆಯಾದರೂ ಸ್ವೋಪಜ್ಞತೆಯಿಂದ ಕೂಡಿದ್ದೆನ್ನಲಾದ ಆಚಾರ್ಯ ಕೃತಿಗಳು ಬಹುತೇಕ ಇಲ್ಲವೇ ಇಲ್ಲವೆನ್ನಬೇಕು.

ತನ್ಮಯತೆ ಮತ್ತು ತಾಟಸ್ಥ್ಯ, ತಪಶೀಲು ಮತ್ತು ತಾತ್ತ್ವಿಕತೆ- ಇವುಗಳ ನಡುವೆ ಒಂದು ತೂಕದ ತಕ್ಕ ಸಮನ್ವಯ ಸಾದಿsಸುವ ಪ್ರe್ಞÁ ಪರಿಷ್ಕಾರ ನಮ್ಮ ಸುಶಿಕ್ಷಿತ ವರ್ಗಗಳಲ್ಲಿ ಸ್ಥಿರವಾಗುವ ತನಕ ದೊಡ್ಡ ಪ್ರಮಾಣದ ವಿವಿಧ ಪ್ರಕಾರದ ವಿಚಾರ ಸಾಹಿತ್ಯಕ್ಕಾಗಿ ನಾವು ಕಾಯಬೇಕು. ಈ ಕ್ಷೇತ್ರದ ಈವರೆಗಿನ ಕೃಷಿಯಿಂದ ವಿಚಾರ ಸಾಹಿತ್ಯ ಸ್ವತಂತ್ರವಾಗಿ ಸಮೃದ್ಧವಾಗಿ ಬೆಳೆಯಬಹುದೆಂಬ ಭರವಸೆಯನ್ನು ತಾಳಬಹುದು.	(ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ